ಕಾರ್ಡುರಾಯ್

 ಉಬ್ಬುರಚನೆಯಿಂದ ಕೂಡಿದ ಕತ್ತರಿಸಿದ ಜುಂಗಿನ ಬಟ್ಟೆ. ಇದು ಫ್ರೆಂಚ್ ಕಾರ್ಡೆ-ಡು-ರಾಯ್ (ರಾಜ ಹುರಿ) ಎಂಬ ಪದದಿಂದ ನಿಷ್ಪನ್ನ ವಾಗಿದೆ ಎಂದು ನಂಬಲಾಗಿದೆ. ಇದನ್ನು ಸಾಮಾನ್ಯವಾಗಿ ಹತ್ತಿಯಲ್ಲಿ ಹೆಚ್ಚಿಗೆ ಜುಂಗು ಸೇರಿರುವ ದಾರಗಳನ್ನು ಉಪಯೋಗಿಸಿ ತಯಾರಿಸುತ್ತಾರೆ. ಜುಂಗು ಸೇರಿರುವ ದಾರಗಳು ಉದ್ದಕ್ಕೆ ಉಬ್ಬುರಚನೆಗಳಾಗಿ ಅಥವಾ ಹುರಿಗಳಾಗಿ ಇಲ್ಲವೆ ತುದಿಗಂಟುಗಳಾಗಿ ರೂಪ ತಾಳುತ್ತವೆ. ಈ ಬಟ್ಟೆ ಒಂದೇ ಹಾಸುನೂಲಿನಲ್ಲಿ ಹಾಗೂ ಎರಡು ಹರವುಗಳಲ್ಲಿ ತಯಾರಾಗುತ್ತದೆ. ಹೆಚ್ಚಿಗೆ ಅಡ್ಡೆಳೆಗಳು ಅನೇಕ ಹಾಸು ನೂಲುಗಳ ಮೇಲೆ ತೇಲುವಂತಿದ್ದು ಉದ್ದಕ್ಕೂ ಅಲ್ಲಲ್ಲಿ ಬಂಧಿಸಲ್ಪಟ್ಟಿರುತ್ತವೆ. ನೇಯ್ಗೆ ಮುಗಿದ ತರುವಾಯ ವಿಶಿಷ್ಟವಾದೊಂದು ಕತ್ತರಿಸುವ ಯಂತ್ರದಿಂದ ಅವನ್ನು ಮಧ್ಯಭಾಗದಲ್ಲಿ ಕತ್ತರಿಸುತ್ತಾರೆ. ಹೀಗೆ ಕತ್ತರಿಸಿದ ಮೇಲೆ ದಾರದ ಕುಚ್ಚುಗಳು ತಳಹದಿ ಎದ್ದುಕಾಣುವ ಕಟ್ಟುಗಳಾಗಿ ಅಥವಾ ಉಬ್ಬುರಚನೆಗಳಾಗಿ ಬಟ್ಟೆಯ ಉದ್ದಕ್ಕೂ ಹೊರಚಾಚಿಕೊಳ್ಳುತ್ತವೆ. ಕತ್ತರಿಸುವುದಕ್ಕೆ ಮುಂಚೆ ಬಟ್ಟೆಯ ಹಿಂಭಾಗಕ್ಕೆ ಅಂಟನ್ನು ಲೇಪಿಸುತ್ತಾರೆ. ಅಂಟಿನಿಂದ ತುಂಬಿರುವ ಜುಂಗು ಕತ್ತರಿಸುವಾಗ ಹೊರಗೆ ಎಳೆದುಕೊಂಡು ಬರುವುದಿಲ್ಲ. ಕತ್ತರಿಸಿದ ಮೇಲೆ ಉಜ್ಜುವ, ಸಂಸ್ಕರಿಸುವ ಮತ್ತು ಕಮರಿಸುವ ಪ್ರಕ್ರಿಯೆಗಳಿಗೆ ಬಟ್ಟೆಯನ್ನು ಒಳಪಡಿಸಿ ಅಂಟನ್ನು ತೆಗೆಯುತ್ತಾರೆ. ಅದರಿಂದ ಹುರಿಯ ಹವಣಿಕೆ ಸ್ಪಷ್ಟವಾಗಿ ಕಾಣುತ್ತದೆ.

 ಕಾರ್ಡುರಾಯ್ ಬಟ್ಟೆಗಳಿಗೆ ಸಾದಾ ಹಿಂಭಾಗವಾಗಲೀ ಮೂಲೆಯಿಂದ ಮೂಲೆಗೆ ನೇಯ್ದ ಟ್ವಿಲ್ ಹಿಂಭಾಗವಾಗಲೀ ಇರಬಹುದು. ಸಾದಾ ಹಿಂಭಾಗದ ಬಟ್ಟೆಯನ್ನು ಟಾಬ್ಬಿ ಬೆನ್ನಿನ ಕಾರ್ಡುರಾಯ್ ಬಟ್ಟೆ ಎಂದು ಕರೆಯುತ್ತಾರೆ. ಟ್ವಿಲ್ ನಮೂನೆಯ ಹಿಂಭಾಗವಿರುವ ಬಟ್ಟೆಗೆ ಜಿನೋವಾ ಬೆನ್ನಿನ ಕಾರ್ಡುರಾಯ್ ಎಂಬ ಹೆಸರಿದೆ.

 ಕಾರ್ಡುರಾಯ್ ಬಲವಾದ ಹಾಗೂ ಭಾರವಾದ ಬಟ್ಟೆ, ಬಾಳಿಕೆಗೆ ಪ್ರಸಿದ್ಧವಾದುದು. ಇದನ್ನು ಕಾರ್ಮಿಕರ ಉಡುಪು, ಕುದುರೆ ಸವಾರಿಗಳಲ್ಲಿ ಉಪಯೋಗಿಸುವ ಬ್ರೀಚಸ್, ಬೇಟೆಯ ಉಡುಪು, ವೈಮಾನಿಕರ ಅಂಗಿ, ಆಟಗಾರರ ತೊಡಿಗೆ ಮೊದಲಾದವುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಸಾದಾ ಬೆನ್ನಿನ ನಯವಾದ ಹಾಗೂ ಹಗುರವಾದ ಬಗೆಯ ಕಾರ್ಡುರಾಯ್ ಬಟ್ಟೆಗಳನ್ನು ಸ್ತ್ರೀಯರ ಉಡುಪು, ಷರಾಯಿ ಹಾಗೂ ಮಕ್ಕಳ ತೊಡಿಗೆಗಳಿಗೆ ಬಳಸುತ್ತಾರೆ.    

 (ಎಲ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ